ಬುಧವಾರ, ಡಿಸೆಂಬರ್ 14, 2011

ಸರ್ವಜ್ಞನ ವಚನಗಳು

ಬಲ್ಲವರ ಒಡನಾಡೆ | ಬೆಲ್ಲವನು ಸವಿದಂತೆ
ಅಲ್ಲದಜ್ಞಾನಿಯೊಡನಾಡೆ – ಮೊಳಕೈಗೆ
ಕಲ್ಲು ಹೊಡೆದಂತೆ ಸರ್ವಜ್ಞ
...
ಬಂದುದನೆ ತಾ ಹಾಸಿ | ಬಂದುದನೆ ತಾ ಹೊದೆದು
ಬಂದುದನೆ ಮೆಟ್ಟಿ ನಿಂತರೆ – ವಿಧಿ ಬಂದು
ಮುಂದೇನ ಮಾಳ್ಕು ಸರ್ವಜ್ಞ

ಸಿರಿ ಬಂದ ಕಾಲದಲಿ | ಕರೆದು ದಾನವ ಮಾಡು
ಪರಿಣಾಮವಕ್ಕು ಪದವಕ್ಕು – ಕೈಲಾಸ
ನೆರೆಮನೆಯಕ್ಕು ಸರ್ವಜ್ಞ

ಏನ ಬೇಡುವಡೊಬ್ಬ | ದಾನಿಯನೆ ಬೇಡುವುದು
ದೀನನ ಬೇಡಿ ಬಳಲಿದಡೆ – ಆ ದೀನ
ನೇನ ಕೊಟ್ಟಾನು ಸರ್ವಜ್ಞ

ಕೋಡಿಯನು ಕಟ್ಟಿದರೆ | ಕೇಡಿಲ್ಲವಾ ಕೆರೆಗೆ
ಮಾಡು ಧರ್ಮಗಳ ಮನಮುಟ್ಟಿ – ಕಾಲನಿಗೆ
ಈಡಾಗದ ಮುನ್ನ ಸರ್ವಜ್ಞ

ಅನ್ನದಾನಗಳಿಗಿಂತ | ಇನ್ನು ದಾನಗಳಿಲ್ಲ
ಅನ್ನಕ್ಕೆ ಮೇಲು ಹಿರಿದಿಲ್ಲ – ಲೋಕಕ್ಕೆ
ಅನ್ನವೇ ಪ್ರಾಣ ಸರ್ವಜ್ಞ

ಉಣ್ಣದೊಡವೆಯ ಗಳಿಸಿ | ಮಣ್ಣಾಗೆ ಬಚ್ಚಿಟ್ಟು
ಚೆನ್ನಾಗಿ ಬಳಿದು ಮೆತ್ತಿದನ – ಬಾಯೊಳಗೆ
ಮಣ್ಣು ಕಂಡಯ್ಯ ಸರ್ವಜ್ಞ

ಕೊಟ್ಟಿರ್ದ ಕಾಲದಲಿ | ಅಟ್ಟುಣ್ಣಲರಿಯದೆ
ಹುಟ್ಟಿಕ್ಕಿ ಜೇನು ಅನುಮಾಡಿ – ಪರರಿಗೆ
ಕೊಟ್ಟು ಹೋದಂತೆ ಸರ್ವಜ್ಞ

ಹೆಣ್ಣಿಂದ ಇಹವುಂಟು | ಹೆಣ್ಣಿಂದ ಪರವುಂಟು
ಹೆಣ್ಣಿಂದ ಸಕಲ ಫಲವುಂಟು – ಮರೆದರೆ
ಹೆಣ್ಣಿಂದ ಮರಣ ಸರ್ವಜ್ಞ

ಮಜ್ಜಿಗೂಟಕೆ ಲೇಸು | ಮಜ್ಜನಕೆ ಮಡಿ ಲೇಸು
ಕಜ್ಜಾಯ ತುಪ್ಪ ಉಣ ಲೇಸು – ಮನೆಗೊಬ್ಬ
ಅಜ್ಜಿಯೇ ಲೇಸು ಸರ್ವಜ್ಞ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...